ಗ್ರಹಣಕಾರಕ ಯಮಳ ನಕ್ಷತ್ರಗಳು -

ಪರಸ್ಪರ ಒಂದರ ಸುತ್ತ ಇನ್ನೊಂದು ಪರಿಭ್ರಮಿಸುತ್ತಿರುವ ಒಂದು ಜೊತೆ ನಕ್ಷತ್ರಗಳಲ್ಲಿ ಒಂದು ಇನ್ನೊಂದನ್ನು ತಾತ್ಕಾಲಿಕವಾಗಿ ಮರೆಮಾಡುವ ವ್ಯವಸ್ಥೆ (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್). ವಿಶ್ವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. 

ಇಂಥ ಒಂದೊಂದು ವ್ಯವಸ್ಥೆಯಲ್ಲೂ ಒಂದು ನಕ್ಷತ್ರ ಇನ್ನೊಂದು ನಕ್ಷತ್ರವನ್ನು ತನ್ನಡೆಗೆ ಆಕರ್ಷಿಸುತ್ತ ಒಟ್ಟಾಗಿ ಒಂದರ ಸುತ್ತ ಇನ್ನೊಂದು ಪರಿಭ್ರಮಿಸುತ್ತಿರುವುವು. ಸಮಬಲವಿರುವ ಇಬ್ಬರು ವ್ಯಕ್ತಿಗಳ ಅಪ್ಪಾಲೆತಿಪ್ಪಾಲೆ ಆಟದಂತೆ ಈ ಪರಸ್ಪರ ಪರಿಭ್ರಮಣೆ ಉಂಟು. ಯಮಳ ನಕ್ಷತ್ರಗಳ ಕಕ್ಷಾತಲ ಭೂಮಿಯ ಮೂಲಕ ಹಾಯುವಂತಿದ್ದರೆ ಆಗ ಒಂದು ನಕ್ಷತ್ರ ಇನ್ನೊಂದು ನಕ್ಷತ್ರದ ಹಿಂದಕ್ಕೆ ಸರಿದು ವೀಕ್ಷಕನ ದೃಷ್ಟಿಯಿಂದ ತಾತ್ಕಾಲಿಕವಾಗಿ ಮರೆಯಾಗಿರುವ ವಿದ್ಯಮಾನ ಘಟಿಸುತ್ತಲೇ ಇರುತ್ತದೆ. ಅಂಥಲ್ಲಿ ಮೊದಲಿನ ನಕ್ಷತ್ರದಿಂದ ಎರಡನೆಯ ನಕ್ಷತ್ರ ಗ್ರಹಣಗೊಂಡಿತು ಎನ್ನುತ್ತೇವೆ. [ಇಲ್ಲಿ ಗ್ರಹಣ ಪದದ ಅರ್ಥ ಕಣ್ಮರೆಯಾಯಿತು ಎಂದು, ಸೌರವ್ಯೂಹದಲ್ಲಿನ ಗ್ರಹಣಗಳನ್ನು ಕುರಿತು ನೀಡಿದ ಅರ್ಥ, ನೆರಳಿನಿಂದ ಅಸ್ಫುಟವಾಗುವಿಕೆ. (ನೋಡಿ- ಗ್ರಹಣ,-ಖಗೋಳೀಯ) ಎಂಬಂತೆ ಅಲ್ಲ ಆದ್ದರಿಂದ, ಭೂಮಿಯನ್ನು ಕುರಿತಂತೆ ಯಮಳನಕ್ಷತ್ರ ವ್ಯವಸ್ಥೆಯೊಂದರ ವಿನ್ಯಾಸವನ್ನು ಅವಲಂಬಿಸಿ ಗ್ರಹಣಕಾರಕ ಯಮಳನಕ್ಷತ್ರ ವ್ಯವಸ್ಥೆ ಉಂಟು. ಪರ್ಸಿಯಸ್ ನಕ್ಷತ್ರಪುಂಜದಲ್ಲಿರುವ (ವಿಷುವದಂಶ 1 ಗಂ. 25ಮಿ.-4ಗಂ. 45 ಮಿ. ಮತ್ತು ಘಂಟಾವೃತ್ತಾಂಶ 310 - 590) ಆಲ್ಗಾಲ್ ಎನ್ನುವ ನಕ್ಷತ್ರ ಸುಪ್ರಸಿದ್ಧವಾದ ಉದಾಹರಣೆ. ಒಂದು ಪ್ರಕಾಶಮಾನ ನಕ್ಷತ್ರ ಮತ್ತು ಒಂದು ಮಸಕು ನಕ್ಷತ್ರ ಇವುಗಳ ವ್ಯವಸ್ಥೆ ಅಲ್ಗಾಲ್. ಸುಮಾರಾಗಿ ಪ್ರತಿ ಎರಡು ದಿವಸಗಳು ಮತ್ತು ಇಪ್ಪತ್ತೊಂದು ಗಂಟೆಗಳಲ್ಲಿ ಪ್ರಕಾಶಮಾನ ಘಟಕ ಮಸಕು ಘಟಕದ ಹಿಂದಕ್ಕೆ ಹೋಗುತ್ತದೆ. ಮತ್ತು ಆಗ ಆಲ್ಗಾಲಿನ ದೃಗ್ಗೋಚರ ಪ್ರಕಾಶ ಗಣನೀಯವಾಗಿ ಅಂದರೆ ಸಾಮಾನ್ಯ ಪ್ರಕಾಶದ ಅರ್ಧಕ್ಕಿಂತಲೂ ಕಡಿಮೆ ಮಟ್ಟಕ್ಕೆ ತಗ್ಗುತ್ತದೆ. ಇದನ್ನು ಬರಿಗಣ್ಣುಗಳಿಂದ ನೋಡಿ ಗುರುತಿಸಬಹುದು. ಗ್ರಹಣಕಾರಕ ಯಮಳ ನಕ್ಷತ್ರಗಳ ಪ್ರಕಾಶದ ಏರಿಳಿತಗಳ ಅಧ್ಯಯನದಿಂದ ವ್ಯವಸ್ಥೆಯ ಘಟಕಗಳ ಗಾತ್ರಗಳನ್ನೂ ದ್ರವ್ಯರಾಶಿಗಳನ್ನು ಗಣನೆ ಮಾಡುವುದು ಸಾಧ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ